Tuesday, July 28, 2009

ಶಹರಾಸ್ಥೆ

ಅಪರಿಚಿತ ಶಹರುಗಳು ರಸ್ತೆಗಳು ಚಹರೆಗಳು


ತರಗೆಲೆಯ ಮುಖಭಾವ ಪ್ರಶ್ನಾರ್ಥ ಹುಬ್ಬುಗಳು


ಗಡಿಬಿಡಿಯ ಘನಜನರು ಜನಗಣದಿ ಏಕಾಂತ


ಕಪ್ಪುರಸ್ತೆಗೆ ಕಪ್ಪು ಬೂಟು ಭಾರ.



ಅಲ್ಲೆ ತಾಳದ ಬಾಲೆ ಪರಿಚಿತಾಪರಿಚಿತದ


ಸನ್ಘರ್ಶವೆಣಿಸುತ್ತ ತಾಳ ಹಿಡಿದು.


ಕುಣಿಯುವಳು ತಳಕಾಗಿ ಕೂಳು ಬೇಳೆಯ ಭಾರ


ತಾಳಮೇಳಕೆ ಕ್ರಾಂತಿ ನಾಳೆ ಹೇಗೋ!



ಹಳೆ ಸೀರೆಯಂಗಡಿಯ ತುಂಬ ಆ ಹುಡಿಗೆಯರು


ಕಡಿಮೆ ಬೆಲೆ - ಮೈತುಂಬು ಬಟ್ಟೆಗಾಗಿ.


ಇತ್ತ ಮಾಲುಗಳಲ್ಲಿ ತುಟ್ಟಿ ಬಟ್ಟೆಯ ತೊಟ್ಟು


ಅನ್ದರಿವೆ ತೋರುವುದು ಚಿತ್ರ ಶಹರು.



ಶಹರ ಭೀದಳು ಯಾಕೊ ಒಂಟಿತನ ಕಾಡುವುದು


ದೊಮ್ಬರಾಟವು ಚೆಂದ ನೋಡಲಷ್ಟೇ..


ವಸ್ತು - ವ್ಯಂಗ್ಯದ ನಾಟ್ಯ ನಗಬೇಕೊ ಅಳಬೇಕೋ


ಆದರೂ ಶಹರಾಸ್ಥೆ , ಶಹರಸ್ಥಿಗಳೇ ನಾವು?

Wednesday, July 22, 2009

ಮೈಕದೇ

ಈ ಲೋಕದೆಲ್ಲರೂ ನನ್ನತ್ತ ಬೆರಳಿಟ್ಟು
ಆಡಿಕೊಳ್ಳುವರಲ್ಲ ಮಾನಬಿಟ್ಟು!
ಆದರೂ ನೀ ಹೇಳೆ ಪರುಷವನು ಕೇಳುತ್ತ
ಭಾದಿರ್ಯ ವೇಷವದು ಎಂಥ ನೋವು!

ಕಣ್ತಪ್ಪಿಸಿ ಜಗವನ್ನು ಕಾಡುದಾರಿಗಳಲ್ಲಿ
ನಮ್ಮ ಹೆಜ್ಜೆಗಳಿತ್ತ ಅಚ್ಚು ನೆನಪಿದೆಯ?
ಇಂದು ನಾ ಒಬ್ಬಂಟಿ ಮತ್ತದೇ ದಾರಿಗಳು
ಬಲುಭಾರ ಹೆಜ್ಜೆಗಳು ಎಂಥ ನೋವು!

ಎಲ್ಲ ಮರೆಯುವ ಯತ್ನ ಹೆಂಡದಂಗಡಿ ಸಖ್ಯ
ಗಜಲು ಬದುಕಿನ ಮಜಲ ಮದದಲ್ಲಿ ತೇಲುತ್ತ
ನೀ ದೂರ ಇತ್ತಾತ್ಮತೊಷವೂ ದೂರಾಗಿ
ಬಾಟಲಿಯ ದೂರುವುದು ಎಂಥ ನೋವು!