Sunday, April 18, 2010

ಮತ್ತೆ, ಆರು ರುಬಾಯತ್ತುಗಳು.

ಕಳೆದ ಭೂತದ ಕೋಪ ವರ್ತಮಾನದ ಶಾಪ
ಆ ಭವಿಷ್ಯದ ತಾಪ ,ಬೆಂಕಿ ಸಾಕಿ.
ಚಿಂತನೆಯ ಫಲ ಪಾಪ ಚಿತೆಯೇರಿದರು ಬಿಡದು,
ತತ್ತ್ವಗೋಷ್ಠಿಗೆ ಕಾಲವಡ್ಡಬರದು.


ಸುಖದ ಮೂಲಕೆ ಶ್ರೇಷ್ಠ ಸನ್ಯಾಸವೆನ್ನುವರು
ಸರ್ವಸಂಗಪರಿತ್ಯಾಗವೆನ್ನುವರು.
ಸಾಕಿ ತಿಳಿಯದು ನನಗೆ ಈ ಶಬ್ದಗಳ ಮರ್ಮ
ಪರ್ವತವು ದುಃಸಾಧ್ಯ, ಪರಮಾಣು ಕೂಡ.


ದಟ್ಟ ಕಪ್ಪಿನ ನಿಶೆಯ ತಿಳಿಸೆರಗಿನಂಚಿನಲಿ
ಹೊನ್ನ ಬಣ್ಣದ ಚಿತ್ರ ರವಿವರ್ಣಕುಂಚದಲಿ
ಅರಳುತಿರೆ ಇತ್ತ ನಿಶೆಯಾ ಪ್ರಭೆಗೆ ಕಂಗಾಲು
ಹಿಡಿಯೋಣ ಬಾ ಬೆಳಗ ಕಿಟಕಿ ತೆರೆದು!


ಸೂರ್ಯ ಬಳಲಿದ ಘಳಿಗೆ ಮರಳಿ ಬಂದಳು ರಾತ್ರಿ
ಪಡುವಣದಿ ಬೀಳ್ಗೊಂಡು ರತಿರೂಪ ಧರಿಸಿ.
ನಳಿರುಬೆರಳುಗಳಿಂದ ಕತ್ತಲನು ಹೊದ್ದಿಸುವ
ಧಾತ್ರಿ - ವತ್ಸಲೆ -ಪ್ರಕೃತಿ- ಮಾಯೆ! ಸಾಕಿ.


ಆಗಸದ ತೊಟ್ಟಿಲಿಗೆ ರಾತ್ರಿ ಚಂದಿರ ಬಿದ್ದ
ಹೊಡೆತಕ್ಕೆ ಬೆಳ್ಳಿನೆರೆಯುಕ್ಕುವುದ ಕಂಡು,
ಕಡಲಿನಡೆಯುಬ್ಬುತಿದೆ, ಚಕ್ರಕ್ಕಿ ತೃಷೆ ನೀಗಿ
ನಲಿಯುತಿದೆ, ಸಂತೃಪ್ತಿ-ಪ್ರಕೃತಿಯೇ ಸಾಕಿ!


ಬಿರುಬಿಸಿಲ ಹಗಲೊಂದು ರಾತ್ರಿಯನು ಕೇಳಿತ್ತು
"ಅದಲುಬದಲಾಗೋಣವೇನು ಒಮ್ಮೆ?"
ರಾತ್ರಿ ಹೇಳಿತು ನಕ್ಕು "ನನ್ನ ಮಗ್ಗುಲು ನೀನು,
ಮತ್ತೇಕೆ ಬದಲಾಟ ಸಂಜೆ ಕೂಡೋಣ!"

Sunday, April 11, 2010

ಇತ್ತೀಚಿನ ರುಬಾಯತ್ತುಗಳು

ನಟ್ಟಿರುಳು ಬೆಳಗಾಗಿ ಮತ್ತಿರುಳು ಹಗಲಾಗಿ
ಬಟ್ಟಲಾಗಸದಲ್ಲಿ ಶಶಿಯು ರವಿಯೂ..
ಸಾಕಿ ಸಾಕೇ ಸುರೆಯು ಇನ್ನೊಂದು ಬಟ್ಟಲಿಗೆ
ಚುಕ್ಕೆಗಳು ಬಂದಾವು ಮಲಗು ಬಾರಾ....


ಕೇಳ್ ಸಿತಾರಿನ ತಂತಿ ತನುಸ್ವನದಿ ನುಡಿಯುತಿದೆ
" ಸುಖ ದುಃಖವನು ನಾನು ಹಾಡಬಲ್ಲೆ!
ಮಧುಲಿಪ್ತಶಾರೀರ ರತಿಲಿಪ್ತ ಆತ್ಮವಿದು
ನೀ ತತ್ತ್ವವನುಭವಿಸು ನಾನೆ ನುಡಿವೆ!"


ಹಾಯ್! ನೋಡು, ಹಾಯ್ದೋಣಿ ಕಡಲಗಲವಳೆಯುತಿದೆ
ತುದಿಗೆ ಕಡಲಕ್ಕಿ ಅಣಕಿಸುತ ದೋಣಿಯನು
ಗೊತ್ತುಗುರಿ ಬೇಕಿಲ್ಲ ಹಾರುವಾಸೆಗೆ ಸಾಕಿ
ಚೇತನಕೆ ಮಿತಿಯಿಲ್ಲ ಹಾರೋಣ ಬಾರೆ!


ಜಾಹಿರಳು ನೀ ಸಾಕಿ ಶಾಯರರ ನುಡಿಗಳಲಿ
ಬಡವನಾಡುವುದ ಕೇಳುವೆಯ ನೀನು?
ತಂತ್ರಮಂತ್ರಗಳೊಳಗೆ ಹೊಸತನವ ಹುಡುಕುತ್ತ
ಹಳತನ್ನೆ ನುಡಿಸುವೆನು ನುಡಿವೆಯೇನು?


ಕಾವಳದ ಚಾದರದಿ ಅಡಗಿ ಮೆಲ್ಲನೆ ಅಡಿಯ-
-ನಡಗಿಸುತಲೇ ಬರುವ ಮಾಗಿಯಂತೆ,
ಮಿದುಸಿತಾರಿನ ತಂತಿಗಳ ಮೀಂಟು ಕಣ್ಮುಚ್ಚಿ
ಮಧು-ಮಂಜು-ರತಿ-ಗೀತ, ನಿರ್ವಾಣ ಸಾಕಿ!


ಕುರುಡು ರಾತ್ರಿಯ ದಟ್ಟ ಕಪ್ಪು ಸುತ್ತಲು ಸಾಕಿ
ಚುಕ್ಕಿಯಣಕಿನ ಎದುರು ಭುವಿ ಬಾಗಿತಲ್ಲ!
ನಿಶೆ ಕಪ್ಪು ಭವ ಕಪ್ಪು ಕ್ಷಿತಿಜ ಕಪ್ಪಿರಲಿ ಬಿಡು
ತೆರೆದ ಬಾಗಿಲ ಬುಡದಿ ಹಣತೆ ಹಚ್ಚು.


ಸಾಕಿ ಕಿಸೆಯಲಿ ಚಂದ್ರತಾರೆಗಳ ತಂದಿರುವೆ,
ಎಂದಿನಂತೆಯೆ ಇಂದು ಬರಬಹುದೆ ಒಳಗೆ?
ಹಣವಂತರಿಗೆ ನೀಡು ಮಧುಪಾತ್ರೆಗಳ, ನಿನ್ನ
ಕಣ್ಣಬಟ್ಟಲ ಮದಿರೆಯೆನಗೆ ಸಾಕು!