ಕಳೆದ ಭೂತದ ಕೋಪ ವರ್ತಮಾನದ ಶಾಪ
ಆ ಭವಿಷ್ಯದ ತಾಪ ,ಬೆಂಕಿ ಸಾಕಿ.
ಚಿಂತನೆಯ ಫಲ ಪಾಪ ಚಿತೆಯೇರಿದರು ಬಿಡದು,
ತತ್ತ್ವಗೋಷ್ಠಿಗೆ ಕಾಲವಡ್ಡಬರದು.
ಸುಖದ ಮೂಲಕೆ ಶ್ರೇಷ್ಠ ಸನ್ಯಾಸವೆನ್ನುವರು
ಸರ್ವಸಂಗಪರಿತ್ಯಾಗವೆನ್ನುವರು.
ಸಾಕಿ ತಿಳಿಯದು ನನಗೆ ಈ ಶಬ್ದಗಳ ಮರ್ಮ
ಪರ್ವತವು ದುಃಸಾಧ್ಯ, ಪರಮಾಣು ಕೂಡ.
ದಟ್ಟ ಕಪ್ಪಿನ ನಿಶೆಯ ತಿಳಿಸೆರಗಿನಂಚಿನಲಿ
ಹೊನ್ನ ಬಣ್ಣದ ಚಿತ್ರ ರವಿವರ್ಣಕುಂಚದಲಿ
ಅರಳುತಿರೆ ಇತ್ತ ನಿಶೆಯಾ ಪ್ರಭೆಗೆ ಕಂಗಾಲು
ಹಿಡಿಯೋಣ ಬಾ ಬೆಳಗ ಕಿಟಕಿ ತೆರೆದು!
ಸೂರ್ಯ ಬಳಲಿದ ಘಳಿಗೆ ಮರಳಿ ಬಂದಳು ರಾತ್ರಿ
ಪಡುವಣದಿ ಬೀಳ್ಗೊಂಡು ರತಿರೂಪ ಧರಿಸಿ.
ನಳಿರುಬೆರಳುಗಳಿಂದ ಕತ್ತಲನು ಹೊದ್ದಿಸುವ
ಧಾತ್ರಿ - ವತ್ಸಲೆ -ಪ್ರಕೃತಿ- ಮಾಯೆ! ಸಾಕಿ.
ಆಗಸದ ತೊಟ್ಟಿಲಿಗೆ ರಾತ್ರಿ ಚಂದಿರ ಬಿದ್ದ
ಹೊಡೆತಕ್ಕೆ ಬೆಳ್ಳಿನೆರೆಯುಕ್ಕುವುದ ಕಂಡು,
ಕಡಲಿನಡೆಯುಬ್ಬುತಿದೆ, ಚಕ್ರಕ್ಕಿ ತೃಷೆ ನೀಗಿ
ನಲಿಯುತಿದೆ, ಸಂತೃಪ್ತಿ-ಪ್ರಕೃತಿಯೇ ಸಾಕಿ!
ಬಿರುಬಿಸಿಲ ಹಗಲೊಂದು ರಾತ್ರಿಯನು ಕೇಳಿತ್ತು
"ಅದಲುಬದಲಾಗೋಣವೇನು ಒಮ್ಮೆ?"
ರಾತ್ರಿ ಹೇಳಿತು ನಕ್ಕು "ನನ್ನ ಮಗ್ಗುಲು ನೀನು,
ಮತ್ತೇಕೆ ಬದಲಾಟ ಸಂಜೆ ಕೂಡೋಣ!"