Thursday, October 22, 2009

ಜನಿವಾರದ ಮರ

ಆ ಕುಂಡದಲ್ಲಿ ಬಂದು
ಬಿದ್ದದ್ದು ಅದೊಂದೇ ಬೀಜ.

ಆಕಾಶ ನೀರೆರೆಯಿತು,
ಗಾಳಿ ಗೊಬ್ಬರ.
ಕ್ಷೇತ್ರ ಹದಗೊಂಡು ನೀರಲ್ಲಿ ಮಿದುಗೊಂದು
ಬೀಜ ಕುಂಡದ ಮಣ್ಣಿನೊಳಗೆ
ಬೆದೆಗೊಳ್ಳತೊಡಗಿತು...
ಎಲ್ಲಿಂದಲೋ ಎರೆಯುತ್ತ ಬಂದು
ಮಣ್ಣ ಹದವನ್ನು ಮಿದುಮಾಡುತ್ತ
ಆ ಎರೆಹುಳ, ಬೀಜದ ಸುತ್ತ
ಸುತ್ತತೊಡಗಿತು....

ಒಂದು ದಿನ,
ತನ್ನನ್ನು ಪೋಷಿಸಿದ
ಕುಂದದೊಳಗಿನ ಮಣ್ಣ
ಮೇಲ್ಪದರವನ್ನು ಭೇದಿಸಿ
ಸಿಳಾರನೆ
ಹೊರಬಿತ್ತು ಹಸಿರು_ಕಂದು
ಅಂಕುರ.

ಸುದ್ದಿಯಾಯಿತು ಊರೆಲ್ಲ.
ಕುಂಡದೊಳಗೆ ಹುಟ್ಟಿದ ಅಶ್ವತ್ಥದ
ಅಂಕುರದ ಸುತ್ತ
ಸತ್ತ ಎರೆಹುಳ.
"ನಾಲವೇಷ್ಟ ಜನನ"!

ಜಮಾಯಿಸಿತು ಪುರೋಹಿತವರ್ಗ,
ಪುರೋಗಾಮಿಗಳು ನಕ್ಕರು,
ಹೆಂಗಳೆಯರು ಅತ್ತರು,
ಊರ ಮಕ್ಕಳನ್ನೆಲ್ಲ ಆವರಿಸತೊಡಗಿತು
ಬಾಲಗ್ರಹ,
ಕಂದ-ಪೈಶಾಚ-ಸರ್ಪ-ವೈಕರ್ತನ.

ಶಾಂತಿಯಾಗಬೇಕು........

ತೆಂಗಿನಕಾಯಿಯಿಂದ ಹೊಡೆದರು
ಕುಂಡದ ಗೋಡೆಗಳಿಗೆ,
ಅವು ಒಡೆದು ಹೋದವು.
ತೆಂಗಿನ ಕಾಯಿ ನಕ್ಕಿತು.

ಅಶ್ವತ್ಥದ ಪುಟ್ಟ ಅಂಕುರವನ್ನು
ಕುಂಡದ ಮಣ್ಣ ಸಮೇತ
ಊರ ನಡುವಿನಲ್ಲಿ ನೆಟ್ಟರು,

ಹಾಲೆರೆದರು,
ನೀರೆದರು,

ಹವನಗಳು ಆಗಿಹೋದವು
ಲೆಕ್ಕವಿಲ್ಲದಷ್ಟು,
ಸುತ್ತ ಕಾಡು ಬರಿದಾಯಿತು.

ವರ್ಷಗಳೇ ಕಳೆದುಹೋದವು...


...................................


ಊರ ನಡುವಿನ ಅಶ್ವತ್ಥದ
ಸುತ್ತ ಕಟ್ಟಿದ ಕಟ್ಟೆಯ ಮೇಲೆ,

ಹಳೆ ಮುಖಗಳ
ಭೂತ ಕನ್ನಡಕದ
ಭೂತ ದೃಷ್ಟಿಯ ಕಣ್ಣುಗಳು,

ಹೊಸಮುಖಗಳ
ಹೊಸತನ್ನು ಹುಡುಕುವ-ಹೊಸೆಯುವ
ಕಣ್ಣುಗಳು,

ಅಶ್ವತ್ಥ ಸುತ್ತುವ
ಬಂಜೆ ಹೆಂಗಸರ
ಆರ್ತ ಕಣ್ಣುಗಳು,

ಸುತ್ತ ಬಿಳಲುಗಳಲ್ಲಿ
ಜೋಕಾಲಿ ಜೀಕುವ
ಚಿಣ್ಣರ ಹೊಳೆವ ಕಣ್ಣುಗಳು...

ಅಶ್ವತ್ಥ ಸೊಂಪಾಗಿ ಬೆಳೆದು
ಹರಡಿ ನಿಂತಿದೆ.
ಅದರ ಬೃಹತ್ ಕಾಂಡದ ಸುತ್ತ ಕಟ್ಟಿದ ಉದ್ದ
ಜನಿವಾರ,
ಭೂತವನ್ನು ನೆನಪಿಸುತ್ತದೆ.
ಅಶ್ವತ್ಥ ನೆನಪಿಸಿಕೊಳ್ಳುವುದಿಲ್ಲ.