Thursday, October 22, 2009

ಜನಿವಾರದ ಮರ

ಆ ಕುಂಡದಲ್ಲಿ ಬಂದು
ಬಿದ್ದದ್ದು ಅದೊಂದೇ ಬೀಜ.

ಆಕಾಶ ನೀರೆರೆಯಿತು,
ಗಾಳಿ ಗೊಬ್ಬರ.
ಕ್ಷೇತ್ರ ಹದಗೊಂಡು ನೀರಲ್ಲಿ ಮಿದುಗೊಂದು
ಬೀಜ ಕುಂಡದ ಮಣ್ಣಿನೊಳಗೆ
ಬೆದೆಗೊಳ್ಳತೊಡಗಿತು...
ಎಲ್ಲಿಂದಲೋ ಎರೆಯುತ್ತ ಬಂದು
ಮಣ್ಣ ಹದವನ್ನು ಮಿದುಮಾಡುತ್ತ
ಆ ಎರೆಹುಳ, ಬೀಜದ ಸುತ್ತ
ಸುತ್ತತೊಡಗಿತು....

ಒಂದು ದಿನ,
ತನ್ನನ್ನು ಪೋಷಿಸಿದ
ಕುಂದದೊಳಗಿನ ಮಣ್ಣ
ಮೇಲ್ಪದರವನ್ನು ಭೇದಿಸಿ
ಸಿಳಾರನೆ
ಹೊರಬಿತ್ತು ಹಸಿರು_ಕಂದು
ಅಂಕುರ.

ಸುದ್ದಿಯಾಯಿತು ಊರೆಲ್ಲ.
ಕುಂಡದೊಳಗೆ ಹುಟ್ಟಿದ ಅಶ್ವತ್ಥದ
ಅಂಕುರದ ಸುತ್ತ
ಸತ್ತ ಎರೆಹುಳ.
"ನಾಲವೇಷ್ಟ ಜನನ"!

ಜಮಾಯಿಸಿತು ಪುರೋಹಿತವರ್ಗ,
ಪುರೋಗಾಮಿಗಳು ನಕ್ಕರು,
ಹೆಂಗಳೆಯರು ಅತ್ತರು,
ಊರ ಮಕ್ಕಳನ್ನೆಲ್ಲ ಆವರಿಸತೊಡಗಿತು
ಬಾಲಗ್ರಹ,
ಕಂದ-ಪೈಶಾಚ-ಸರ್ಪ-ವೈಕರ್ತನ.

ಶಾಂತಿಯಾಗಬೇಕು........

ತೆಂಗಿನಕಾಯಿಯಿಂದ ಹೊಡೆದರು
ಕುಂಡದ ಗೋಡೆಗಳಿಗೆ,
ಅವು ಒಡೆದು ಹೋದವು.
ತೆಂಗಿನ ಕಾಯಿ ನಕ್ಕಿತು.

ಅಶ್ವತ್ಥದ ಪುಟ್ಟ ಅಂಕುರವನ್ನು
ಕುಂಡದ ಮಣ್ಣ ಸಮೇತ
ಊರ ನಡುವಿನಲ್ಲಿ ನೆಟ್ಟರು,

ಹಾಲೆರೆದರು,
ನೀರೆದರು,

ಹವನಗಳು ಆಗಿಹೋದವು
ಲೆಕ್ಕವಿಲ್ಲದಷ್ಟು,
ಸುತ್ತ ಕಾಡು ಬರಿದಾಯಿತು.

ವರ್ಷಗಳೇ ಕಳೆದುಹೋದವು...


...................................


ಊರ ನಡುವಿನ ಅಶ್ವತ್ಥದ
ಸುತ್ತ ಕಟ್ಟಿದ ಕಟ್ಟೆಯ ಮೇಲೆ,

ಹಳೆ ಮುಖಗಳ
ಭೂತ ಕನ್ನಡಕದ
ಭೂತ ದೃಷ್ಟಿಯ ಕಣ್ಣುಗಳು,

ಹೊಸಮುಖಗಳ
ಹೊಸತನ್ನು ಹುಡುಕುವ-ಹೊಸೆಯುವ
ಕಣ್ಣುಗಳು,

ಅಶ್ವತ್ಥ ಸುತ್ತುವ
ಬಂಜೆ ಹೆಂಗಸರ
ಆರ್ತ ಕಣ್ಣುಗಳು,

ಸುತ್ತ ಬಿಳಲುಗಳಲ್ಲಿ
ಜೋಕಾಲಿ ಜೀಕುವ
ಚಿಣ್ಣರ ಹೊಳೆವ ಕಣ್ಣುಗಳು...

ಅಶ್ವತ್ಥ ಸೊಂಪಾಗಿ ಬೆಳೆದು
ಹರಡಿ ನಿಂತಿದೆ.
ಅದರ ಬೃಹತ್ ಕಾಂಡದ ಸುತ್ತ ಕಟ್ಟಿದ ಉದ್ದ
ಜನಿವಾರ,
ಭೂತವನ್ನು ನೆನಪಿಸುತ್ತದೆ.
ಅಶ್ವತ್ಥ ನೆನಪಿಸಿಕೊಳ್ಳುವುದಿಲ್ಲ.

Tuesday, September 29, 2009

ಅಗ್ನಿವರ್ಣ

ಉರಿಯುತ್ತದೆ, ಕರಗುತ್ತದೆ,
ಕರಗಿಸುತ್ತದೆ ಹರಡುತ್ತ..

ಸುತ್ತಲ ಅವಕಾಶವನ್ನು ಬಂಗಾರದ ಬಣ್ಣದಲ್ಲಿ ಮೀಯಿಸುತ್ತ
ಜಾದೂಗಾರನ ಕೈಯಲ್ಲಿ ಬಣ್ಣ ಬದಲಿಸುವ ಬೆಂಕಿಯ ಮೂಲದಗ್ನಿಗೆ ಒಂದೇ ಮುಖ.

ಸಮಿತ್ತುಗಳ ಆಹುತಿಯಲ್ಲಿ ಹುಟ್ಟುವ
ಯಜ್ನಕುಂಡದ ಅಗ್ನಿಗೆ ದೇವತಾಭಾವ.
ಸುತ್ತ ಶತರುದ್ರ - ಚಂಡೀ - ಮಂಗಳ- ಸ್ವಸ್ತಿ
ಮಂತ್ರಪುಷ್ಪ.
ಘನ ಪಾಠಿಗಳ ಗಂಟಲಿನಿಂದ ಚಿಮ್ಮುವ ನಾದಾಗ್ನಿಯ ಸಮೀಕರಣ,
ಯಜ್ಞಕುಂಡದಿಂದ ಚಿಮ್ಮುವ ಕಲ್ಯಾಣಾಗ್ನಿಯ ಜ್ವಾಲೆಗಳೊಂದಿಗೆ.
ರುದ್ರ ಜಾಗ್ರತ ದೃಷ್ಟಿ , ಶ್ರವಣ.


ಮಹಾಭೂತದಿಂದ ಹೊರಬಂದು ಅಗ್ನಿ ಬೆಂಕಿಯಾದಾಗ
ಮುಖಗಳೂ ಹಲವಾರು, ಪ್ರಭಾವವೂ.

ಮಿಥುನಕ್ಕೆ ಮೀಸಲಿಟ್ಟ ಥಂಡಿಕೋಣೆಯ ಅಗ್ಗಿಷ್ಟಿಕೆಯಲ್ಲಿ
ವಾಜೀಕರ ಬೆಂಕಿಯಿಂದ ನಿರಂತರ ಕಾಮೋನ್ಮಾದ.
ಮನ್ದಾಗ್ನಿಯಿಂದ ಹತ್ತು ಇಂದ್ರಿಯಗಳೂ ಜಾಗ್ರತ.
ಬೆಳಗೆದ್ದು ಮುಲುಕುವ ಮಿಥುನದ ಮುಖದಲ್ಲಿ ಉಳಿವ ಬೂದಿ,
ಚಳಿಯಲ್ಲಿ ಅರಳಿದ ಮೈ ಮನದ ಪ್ರಭಾವ.

ಹಗಲೆಲ್ಲ ಬಿಸಿಯ ವಿಪರೀತದ ಭಾವಕ್ಕೆ ಚಡಪಡಿಕೆ ಮತ್ತೆ.
ಮತ್ತೆ ಚಡಪಡಿಕೆ ರಾತ್ರಿಯೆಲ್ಲ ಚಳಿಯ ವಿಪರೀತದ ಭಾವಕ್ಕೆ.

ಬಿಸಿ ಚಳಿಯ ಸಂಘರ್ಷ,
ಅಗ್ಗಿಷ್ಟಿಕೆಯ ಬೆಂಕಿ.

ಅಷ್ಟಗಲ ಚಿತೆಯ ಚಟಪಟ ಜ್ವಾಲೆಗಳಲ್ಲಿ,
ಆತ್ಮನ ಮಹಾಸ್ಫೋಟ.
ಸುತ್ತ ಮೌನ ಸ್ಮಶಾನ.
ಸತ್ತ ಹೆಣದ ಮೇಲೆ ಮತ್ತೆ
ದೇವತಾಭಾವ.

ಜೀವಾಗ್ನಿಗೆ ಅಗ್ನಿಯಿಂದಲೇ ಮುಕ್ತಿ.
ಬೆಂಕಿ ಕರಗುತ್ತದೆ, ಬೆಂಕಿಯಿಂದಲೇ.

ಯಜ್ಞಕುಂಡದ ಬೆಂಕಿ
ರಾತ್ರಿ ಮಿಥುನದಲ್ಲಿ ಕರಗಿ
ಮಾರನೆಯ ದಿನ ಚಿತೆಯೇರಿ
ಮಹಾಭೂತವಾಗುತ್ತದೆ.

Saturday, September 26, 2009

ಮತ್ತೆರಡು ರುಬಾಯತ್ತುಗಳು


ಧರೆಗಿಳಿದು ಬಂದಳೋ ಕಪ್ಪುಸುಂದರ ರಾತ್ರಿ
ನಿಬ್ಬೆರಗು ಭುವಿಯವಳ ಛಾಯೆಯಲಿ ಕಪ್ಪು,
ಹಣತೆ ಬೆಳಗಿಸಿ ಕದವ ತೆರೆದಿತ್ತು ಬಾ ಸಖಿಯೆ
ಮನೆ ಮನವು ತೆರೆದಿರಲಿ ಮಧುಪಾತ್ರೆಯಂತೆ.


ನೋಡಲ್ಲಿ ನಲ್ಬೆಳಗು ಬಾನ ತುದಿಯಲಿ ಮೂಡಿ
ರವಿಚಂದ್ರ ನಕ್ಷತ್ರರಾಟ ಜೂಟಾಟ!
ಮಧುರತಿಯ ತೋಷದಲಿ ದೇಹವರಳಿದೆ ರಾತ್ರಿ
ಮುದ್ದು, ಬೆಳಗಲಿ ಮಿಂದು ಆತ್ಮವರಳಲಿ ಬಾರೆ..

Sunday, August 2, 2009

ಅವಳ ವಸಂತ...

ಅದು ವಸಂತ.

ಅವಳು ಮತ್ತು ನಾನು,

ಎಂದಿನಂತೆ ನಮ್ಮ ಅಮರ ಪ್ರೇಮಕ್ಕೆ

ಸಾಕ್ಷಿಯಾಗಿದ್ದ

ದೊಡ್ಡ ಮಾವಿನಮರ.

ಪ್ರಕೃತಿ ಚೆಂದವಿತ್ತು.

ಅವಳು ಕವಿಯಾಗು ಎಂದಳು.

ಮುಖವಾಡವನ್ನು ಚಾಚಿ ಧರಿಸಿದೆ..

"ಕೋಗಿಲೆಯು ಕೂಗುವುದು ಪ್ರಕೃತಿ ಗೀತ.

ಭೂಕಂಪ ಸಂತ್ರಾಸ ಭೂಮಿಗೇ ತಾನೆ!

ನಿನ್ನ ಅಂಗಿಗೆ ಎಷ್ಟು ಗುಂಡಿಗಳು ಉಂಟೋ

ಹೊಸ ಹಾಳೆ ಮೂಸಲದೆಂಥ ರಮ್ಯ!"

ಅವಳ ಮುಂಗುರುಳು ಹಣೆಯ ತುಂಬ

ಹರಡಿ ಮತ್ತೆ ಯಥಾಸ್ಥಿತಿಯಲ್ಲಿ ನಿಂತಿತು.

ಅರ್ಥವಾಗಲಿಲ್ಲವೆಮ್ಬುದು ನನಗೂ ಅರ್ಥವಾಯಿತು..

ಮನಸ್ಸರಳಿತು..

ಮುಖವಾಡ ಕಳಚಿಟ್ಟೆ

"ನಿನ್ನ ನಾಚಿಕೆ ಛಂದ - ಚಂದ ಪರದೆಯ ಹಿಂದೆ

ಚಂದ - ಛಂದದಿ ಪದ್ಯ ಬರೆದಿಟ್ಟ ಹಾಗೆ..

ಮಧ್ಯರಾತ್ರಿಯ ಚಂದ್ರ ಘುಲಾಮಲಿ ಗಜಲುಗಳು

ಹಳೆ ಮದ್ಯದಾ ಶೀಶೆ ಜತೆಗಿದ್ದ ಹಾಗೆ.."

ಅವಳು ನಕ್ಕಳು,

ಮಳೆಗಾಲದ ಪ್ರಕೃತಿಯಂತೆ..

"ಕೋಗಿಲೆಯ ಕುಲದಲ್ಲಿ ಕೊಲಾಹಲವೆದ್ದಿತ್ತು

ನಿದ್ದೆಯಿಂದಾಗಷ್ಟೆ ಎದ್ದವೋ ಎಂಬಂತೆ

ಕೂಕುಹೂಗಳ ರಿಂಗನದಿ ಮರಗಳೆಲೆ

ಗಳೆಲ್ಲವೂ ಕೋಗಿಲೆಯ ಹಸಿರು ರೂಪ."

ವಸಂತ ಕಳೆದ.

Saturday, August 1, 2009

ಪಾಟಿಚೀಲ

ಪಾಟಿ ಚೀಲವೆಂಬ
ಶಾಲೆಕಲಿಯುವ ಸಾಧನಕ್ಕೆ
ಸಾಕಷ್ಟು ಅವಯವಗಳು..

ಪಾಟಿಯ ಪುಟ್ಟ ಕಪ್ಪು ಹಲಗೆಯ
ಮೇಲಿನ ಅನಿರ್ದಿಷ್ಟ ಬರಹಗಳನ್ನು
ಅಳಿಸುವ ಪುಟ್ಟ ಕೈಯ ಗುರುತು,
ಮುಂದೆಂದೋ ಆಗಬಹುದಾದ ಕಾವ್ಯದ ಹುಟ್ಟು?
ಮುದ್ದಾಗಿ, ಅಚ್ಚಾಗಿ ಬರೆಯಲೆಂದು
ನಾಲಗೆಯಲ್ಲಿ ಚೀಪಿ ಬಳಪವನ್ನು ತಿದ್ದುತ್ತ ಬರೆಯುವುದು,
ಮುಂದೆಂದೋ ಹುಟ್ಟಬಹುದಾದ ಚಿತ್ರದ ಹೆಜ್ಜೆ?
ಗೊಣ್ಣೆಸೊಪ್ಪಿನಿಂದ ತಿಕ್ಕಿ ತಿಕ್ಕಿ
ಪಾಟಿಯನ್ನು ಧಾಳಾಗಿ ಕಪ್ಪಾಗಿಸಿ
ತನ್ನ ಪಾಟಿಯ ಕಡುಗಪ್ಪನ್ನು ಸಹಪಾಠಿಗಳಲ್ಲಿ
ಸುಂದರವೆಂದು ಹೆಮ್ಮೆಯಿಂದ ಬೀಗುವುದು,
ಮುಂದೆಂದೋ ಮರೆಯಬಹುದಾದ ಸೌಂದರ್ಯಪ್ರಜ್ಞೆ? ; ಕಪ್ಪು ಕೊಳಕು!

ಹೊಸ ಸ್ವರೂಪದೊಂದಿಗೆ ಬದಲಾಗುತ್ತದೆ
ಚೀಲ. ಪಾಟಿಯಿಲ್ಲದ ಚೀಲ.
ಕಾಪಿ ಪುಸ್ತಕಗಳು, ಅಸಂಖ್ಯಾತ
ಪೆನ್ನು ಪೆನ್ಸಿಲ್ಲು ನೋಟುಬುಕ್ಕುಗಳು..

ಮಕ್ಕಳೀಗ ಅಳಿಸುವುದಿಲ್ಲ ಬರೆದದ್ದನ್ನು,
ಹರಿದು ಬಿಸಾಡುತ್ತವೆ...
ಅಪ್ಪ ಒಲೆಯ ಬೆಂಕಿಗೆ ಹಚ್ಚುತ್ತಾನೆ .

ಹೊಸವೆಷ ಹೊಸರಂಗಿನ
ಹೊಸ ನಮೂನೆಯ ಚೀಲಗಳು.
ಶಾಲೆ-ಕಾಲೇಜುಗಳ ತರುಣ ತರುಣಿಯರ ಬೆನ್ನ
ಕೆಳಗೆ ತುಂಬುವಂತೆ.
ಚೀಲಗಳ ಅವಯವಗಳೂ ತುಂಬಿರುತ್ತವೆ,
ಹೆಚ್ಚಾಗಿವೆ.

ಶಾಲೆಗಷ್ಟೇ ಸಾಧನವಾದ
ಚೀಲಗಳು..
ಮನೆಗೆ ಬಂದು ಸೋತ ಹೆಗಲಿನಿಂದ
ಜಾರಿ ಬೀಳುತ್ತವೆ.

Tuesday, July 28, 2009

ಶಹರಾಸ್ಥೆ

ಅಪರಿಚಿತ ಶಹರುಗಳು ರಸ್ತೆಗಳು ಚಹರೆಗಳು


ತರಗೆಲೆಯ ಮುಖಭಾವ ಪ್ರಶ್ನಾರ್ಥ ಹುಬ್ಬುಗಳು


ಗಡಿಬಿಡಿಯ ಘನಜನರು ಜನಗಣದಿ ಏಕಾಂತ


ಕಪ್ಪುರಸ್ತೆಗೆ ಕಪ್ಪು ಬೂಟು ಭಾರ.ಅಲ್ಲೆ ತಾಳದ ಬಾಲೆ ಪರಿಚಿತಾಪರಿಚಿತದ


ಸನ್ಘರ್ಶವೆಣಿಸುತ್ತ ತಾಳ ಹಿಡಿದು.


ಕುಣಿಯುವಳು ತಳಕಾಗಿ ಕೂಳು ಬೇಳೆಯ ಭಾರ


ತಾಳಮೇಳಕೆ ಕ್ರಾಂತಿ ನಾಳೆ ಹೇಗೋ!ಹಳೆ ಸೀರೆಯಂಗಡಿಯ ತುಂಬ ಆ ಹುಡಿಗೆಯರು


ಕಡಿಮೆ ಬೆಲೆ - ಮೈತುಂಬು ಬಟ್ಟೆಗಾಗಿ.


ಇತ್ತ ಮಾಲುಗಳಲ್ಲಿ ತುಟ್ಟಿ ಬಟ್ಟೆಯ ತೊಟ್ಟು


ಅನ್ದರಿವೆ ತೋರುವುದು ಚಿತ್ರ ಶಹರು.ಶಹರ ಭೀದಳು ಯಾಕೊ ಒಂಟಿತನ ಕಾಡುವುದು


ದೊಮ್ಬರಾಟವು ಚೆಂದ ನೋಡಲಷ್ಟೇ..


ವಸ್ತು - ವ್ಯಂಗ್ಯದ ನಾಟ್ಯ ನಗಬೇಕೊ ಅಳಬೇಕೋ


ಆದರೂ ಶಹರಾಸ್ಥೆ , ಶಹರಸ್ಥಿಗಳೇ ನಾವು?

Wednesday, July 22, 2009

ಮೈಕದೇ

ಈ ಲೋಕದೆಲ್ಲರೂ ನನ್ನತ್ತ ಬೆರಳಿಟ್ಟು
ಆಡಿಕೊಳ್ಳುವರಲ್ಲ ಮಾನಬಿಟ್ಟು!
ಆದರೂ ನೀ ಹೇಳೆ ಪರುಷವನು ಕೇಳುತ್ತ
ಭಾದಿರ್ಯ ವೇಷವದು ಎಂಥ ನೋವು!

ಕಣ್ತಪ್ಪಿಸಿ ಜಗವನ್ನು ಕಾಡುದಾರಿಗಳಲ್ಲಿ
ನಮ್ಮ ಹೆಜ್ಜೆಗಳಿತ್ತ ಅಚ್ಚು ನೆನಪಿದೆಯ?
ಇಂದು ನಾ ಒಬ್ಬಂಟಿ ಮತ್ತದೇ ದಾರಿಗಳು
ಬಲುಭಾರ ಹೆಜ್ಜೆಗಳು ಎಂಥ ನೋವು!

ಎಲ್ಲ ಮರೆಯುವ ಯತ್ನ ಹೆಂಡದಂಗಡಿ ಸಖ್ಯ
ಗಜಲು ಬದುಕಿನ ಮಜಲ ಮದದಲ್ಲಿ ತೇಲುತ್ತ
ನೀ ದೂರ ಇತ್ತಾತ್ಮತೊಷವೂ ದೂರಾಗಿ
ಬಾಟಲಿಯ ದೂರುವುದು ಎಂಥ ನೋವು!


Saturday, June 6, 2009

ಪ್ರಾಗಭಾವದ ಪ್ರತಿಯೋಗಿ ಕಾರ್ಯ.

ಕಾಲವೊಂದರಲ್ಲಿ ಹಿಂದೆ , ಇದೇ ಮನಸ್ಸಿನಲ್ಲಿ
ಸತತ ಕಾರ್ಯ, ವರ್ಣ ಮಾಲೆಗಾಗಿ.
ಅಭ್ಯಾಸ ವರ್ಣ ಸ್ಥಿರತೆಗಾಗಿ.

ಮನ ಕಲಕುವ ನೆನಪುಗಳು,
ಬಾಲ್ಯದ ಬದುಕಿನ ಗಮ್ಮತ್ತು,
ಆಟದ ಮೈದಾನದ ವಿಶಿಷ್ಟ ದಿರಿಸಿನಲ್ಲಿ,
ಮಣ್ಣಿನಲ್ಲಿ ಬಿದ್ದು,
ಎದ್ದು ಓಡಿ ಆಡಿ ಹಿಡಿವ ಚೆಂಡು..
ಬಣ್ಣದಂಗಿ ಚಡ್ಡಿ,
ಕಿಸೆಯಲ್ಲಿ ನೆಲಗಡಲೆ,
ಅಮ್ಮ ಹಶಿವಿಗೆ ಕೊಟ್ಟದ್ದು.
ಎಲ್ಲ ಮಾಸದ ಸ್ಪಷ್ಟ ಬಿಳಿ ನೆನಪು.

ಎದುರಿಗೆ ಹಾರುತ್ತಿದ್ದ ಮಾಸ್ತರರ ಹುಣಸೆ ಬರಲು,
ಬಿದ್ದ ಪೆಟ್ಟಿಗೆ ಹುಯ್ದುಕೊಂಡಿದ್ದ ಉಚ್ಚೆಯ ಒದ್ದೆ,
ಅಪೂರ್ವಕ್ಕೆ ಕಪ್ಪು ಹಲಗೆಯ ಮುಂದೆ ನಿಂತು
ಬಿಗುಮಾನದಲ್ಲಿ ಮುದುರಿ,
ಕಣ್ಣರಳಿಸಿ ಹಾಡಿದ್ದು, ತಲೆಯಾಡಿಸುತ್ತಾ,
ಅಣ್ಣನು ಮಾಡಿದ ....

ಮಂಜಾದ ಕಣ್ಣ ಪರದೆಯ ಮೇಲೆ,

ಬಾಲ್ಯದ ನಾನು, ಆಹಾ...
ಅಂದಿತ್ತು ಪ್ರಾಗಭಾವ ಇಂದಿನದು..
ಇನ್ದದರ ಪ್ರಧ್ವಮ್ಸಾಭಾವ...
ಕಾರಣ - ಅಂದು ಇಂದಿಗೆ, ಇಂದು - ಕಾರ್ಯ, ನಾಳೆಗೆ..

ಕಾರಣದ ಪ್ರಭಾವದಲ್ಲಿ -

ಮರೆತಿಲ್ಲಪರದೆಯ ಮೇಲೆ
ಪರದೆಗಳು.. ತಂತುವಿನ ಮೇಲೆ
ತಂತುಗಳು... ಬಿಡಿಸಿ ತೆರೆ ತೆರೆದು
ಹಿಮ್ಮೇಳ ವೈಭವದ ಮೇಲು ಸವಿ ನೆನಪು...

ಶೂ ಇಲ್ಲದಿದ್ದರಾಗುವುದಿಲ್ಲವಿಂದು..
ಮರೆತಿಲ್ಲ ; ಬರಿಗಾಲ ಓಟ.
ಬೇಕೆ ಬೇಕು ಗರಿ ಗರಿ ಪ್ಯಾಂಟು,
ಮರೆತಿಲ್ಲ ; ಹೊಲೆದ ಚಡ್ಡಿ, ಅದರ ಹಳದಿ
ಬಣ್ಣ, ನೀಲಿ ಅಂಗಿ.
ಪಾಟಿಚೀಲದ ಒಳಗೆಲ್ಲ ಬಣ್ಣಬಣ್ಣದ
ಚಿತ್ರಗಳು. ಎಲ್ಲ ವರ್ಣಗಮ್ಯ.

ಇಂದೆಲ್ಲ ಶಬ್ದಗಮ್ಯ.

ವಿತಂಡದ ಆಳಗಳಲ್ಲಿ ಒಳಹೊಕ್ಕ

ಒಣ ಮಾತುಗಳು.

ಕೈಯಲ್ಲಿ "ದೀಪಿಕೆ"..

ಮನದಾಳದ ತರ್ಕಕ್ಕೆ

ಕಣ್ಣಿಗೆ ಕಾಣುವುದೆಲ್ಲ ದಿಟ್ಟ ವಾದಗಳು,

ಸಾಮ್ಯವೈಷಮ್ಯಗಳು

ಮೆದು ಗುಡ್ಡದ ತುತ್ತತುದಿಯಲ್ಲಿ

ನಿಂತು ಕೂಗುವುದು..

"ಕಾರ್ಯವು ಪ್ರಾಗಭಾವದ ಪ್ರತಿಯೋಗಿ,

ಅಸಾಧಾರಣತೆ

ಕಂಡಾಗ

ನೆನಪಾಗುವುದು ಕಾರಣ".

Saturday, May 30, 2009

ರುಬಾಯತ್ತುಗಳು ಮತ್ತಷ್ಟು...

ರುಬಾಯತ್ತು ೫

ಆ ತತ್ತ್ವ ಈ ತತ್ತ್ವ ಎಲ್ಲ ತತ್ತ್ವಗಳಲ್ಲು
ಒಂದೊಂದು ನುಡಿಮುತ್ತ ಹೆಕ್ಕಿ ಬಂದು,
ಮಧುಪಾತ್ರೆ ಮಧುಮತಿಯ ಸಾಂಗತ್ಯ ಪಡೆದವನ
ಕೊರಳಲ್ಲಿಹೊಮ್ಮುವುದು ತತ್ತ್ವಸಾರ.

ರುಬಾಯತ್ತು ೬

ನನ್ನೆದೆಯ ಹರವಿನಲ್ಲಿ ನೀನ್ ತಲೆಯ ಹರಡಿರಲು
ನನ್ನ ತನು ನಿನ್ನ ಬಿಸಿ ನಿನ್ನೆದೆಯ ಮಿದು ಮಿಂದು
ಸುಖದ ತುದಿ - ಹೊರಗೆ ಮಳೆ ಮೆಘರಾಗದ ಗುನುಗು
ಅಂಗಳದಿ ನಲುಗಿತ್ತು ನಾಗದಾಳಿ.

ರುಬಾಯತ್ತು೭

ಈ ಸಂಜೆ ಬಲು ಸೊಗಸು ನೀನೆನ್ನ ಬಳಿಯಿರಲು
ತೆಂಗಿನೆಲೆಗಳ ಬಳುಕು ಅರ್ಧ ಬೆಳಕು.
ತಂಪನೆಯ ತಂಗಾಳಿ ಜಡಿಮಳೆಯ ತೀನ್ತಾಳ
ತಾರದಾಚೆಯ ಗೀತ ತೀರ ತಟ್ಟಿ..

ರುಬಾಯತ್ತು೮

ಭೂಮಿಯದು ತಿರುಗುವುದು ತನ್ನ ಕಕ್ಷೆಯ ಸುತ್ತ
ನಾ ಮನುಜ ತಿರುಗುವೇನು ಅದರ ಪರಿಧಿಯನರಸಿ
ಭೂಮಿ ತಾ ಸುತ್ತುತ್ತ ನಾನವಳ ಸುತ್ತುತ್ತ
ಆಕರ್ಷಚಕ್ರದಲಿ ನಿರ್ವ್ಯಾಜ ಪ್ರೇಮ!

ರುಬಾಯತ್ತು೯

ಹಾಗೊಂದು ರಾತ್ರಿಯಲಿ ವಿರಹಧಗೆ ಮೈಸುತ್ತು
ಪ್ರಿಯತಮೆಯ ಸಾನ್ನಿಧ್ಯಕಾಗಿ ಒರಲಿ
ಬೀಳ್ಕೊಡುವ ಈ ಗಳಿಗೆ ಎದೆಯ ಪ್ರಾಂಗಣ ಉಕ್ಕಿ
ಹೃದಯಮಂಜೂಷೆಯಲನೂಹ್ಯ ರಾಗ.

ರುಬಾಯತ್ತು೧೦

ನಡುರಾತ್ರಿ ವೈರಾಗ್ಯ ಪಡೆದು ನಾ ಹೊರಬಿದ್ದು
ಊರ ನಡುವೀಥಿಯಲಿ ಸಿದ್ಧಿಯರಸಿ.
ಉದುಪತಿಯ ಹೊಳೆಯು chaKOrananu ಒಲಿಸುತಿರೆ
ಭಾವರಾಗದೊಳಗೆ ನಾ ಊಹ್ಯವನು ಕಂಡೆನ್..

ಮತ್ತೆ ಸಿಗ್ತೇನೆ....

Thursday, May 28, 2009

ಹೊಸ ದಿನ, ಹಳೆ ಮಾತು .

ಗೆಳೆಯರ ಸ್ವಾಗತಕ್ಕೆ, ಪ್ರೀತಿಯಿಂದ...

ರುಬಾಯತ್ತುಗಳೆಂದರೆ, ಯಾವುದೇ ವಿಷಯವೊಂದನ್ನು ಕೇವಲ ನಾಕೇ ಸಾಲುಗಳಲ್ಲಿ ಹಿಡಿದಿದಬಹುದಾದ ಒಂದು ಪದ್ಯಪ್ರಕಾರ.
ಇಲ್ಲಿ ನಿಮಗೆ ವಿಷಯದ ವಿವರಣೆಗಿಂತ ಅದರ ಘನತೆ ಮುಖ್ಯವಾಗುತ್ತದೆ. ಮೇಲ್ನೋಟಕ್ಕೆ ಸುಮ್ಮನೆ ನಾವು ಕಷ್ಟದ ಸಂಗತಿಯಿದು ಎಂದು ಸುಲಭದಲ್ಲಿ ಹೇಳಿಬಿದಬಹುದಾದರೂ ಕೊಂಚ ಆಸಕ್ತಿ, ಹೊಸ ಹವ್ಯಾಸ ಮತ್ತು ಜಿಜ್ಞಾಸೆ, ವ್ಯಕ್ತಿಗತ.
ಇಲ್ಲಿ ಹೊರಹಾಕುತ್ತಿರುವ ನನ್ನ ರುಬಾಯತ್ತುಗಳಲ್ಲಿ ನಿಮಗೆ ಡಿವಿಜಿಯವರ ಉಮರ್ ಖಯ್ಯಾಮನ ರುಬಾಯತ್ತುಗಳ ಅನುವಾದ "ಉಮರನ ಒಸಗೆ"ಯಾ ತೀವ್ರ ಛಾಯೆ ಕಂಡೀತು. ಒಪ್ಪಿಕೊಳ್ಳಬೇಕು. ನೆರಳಿಲ್ಲದೆ ಬೀಜ ಕುದಿಯೊದೆಯುವುದಿಲ್ಲ ಅಂತ ನನ್ನ ಭಾವನೆ. ಇವುಗಳನ್ನು ಬರೆಯಲು ಹಣುಕಿದ್ದು ನಾಲ್ಕು ವರ್ಷಗಳ ಹಿಂದೆ... ಅಂದಿನಿಂದ ಇಂದಿನವರೆಗೆ ಅನೂಚಾನವಾಗಿ ಕ್ಲಾಸ್ರೂಮಿನ ಕೊನೆಯ ಬೆಂಚಿನಲ್ಲಿ, ಕ್ರಿಕೆಟ್ ಗ್ರೌಂಡಿನ ಶೂನ್ಯವೇಳೆಯಲ್ಲಿ, ಕಾಲೇಜು ಕ್ಯಾಂಟೀನಿನಲ್ಲಿ, ಅವಳಿಗಾಗಿ ನನ್ನನ್ನು ಯಾವಾಗಲೂ ಕಾಯಿಸುತ್ತಿದ್ದ ದಾವಣಗೆರೆ ಬಸ್ ಸ್ಟ್ಯಾಂಡಿನಲ್ಲಿ, ಓದಲೆಂದು ಕೂರುತ್ತಿದ್ದ ಸಂಜೆಯ ಗದ್ದೆಬಯಲಿನಲ್ಲಿ, ಬಾಥ್ರೂಮಿನಲ್ಲಿ, ತೋಇಲೆತ್ತಿನಲ್ಲಿ, ಗಡಂಗಿನಲ್ಲಿ, ಏಕಾಂತದ ನೋವಿನಲ್ಲಿ, ಗಲಾಟೆಯ ಅಬ್ಬರದಲ್ಲಿ, ..... ಹೀಗೆ ಹೋದಲ್ಲೆಲ್ಲ ಹುಟ್ಟಿದ ನನ್ನ ನೂರಾರು ರುಬಾಯತ್ತುಗಳು ಇನ್ನು ನಿಮ್ಮ ಮುಂದೆ.......


ರುಬಾಯತ್ ೨

ದೇವನೆಮ್ಬನ ರೂಪ ಹಲವಾರು ಬಗೆಯಲ್ಲಿ
ನಾಸ್ತಿಕರ ಕರೆವಲ್ಲಿ ಶೃಂಗಾರವಾಗಿ.
ಕಂಡು ನಾ ನಿಂತಲ್ಲೇ , ಭಾವರಸ ಒಳಗೆಲ್ಲ
ತಡೆಯಲಾಗದೆ ಮನೆಯ ರತಿಗಾಗಿ ಬಂದೆನ್.

ರುಬಾಯತ್ ೩

ಸಂಗೀತಶಾಸ್ತ್ರವನ್ನು ಬರೆದರೆದು ಸಾಮ್ರಾಟ
-ನಾದವನ ಬಳಿ ಸಾರಿ ಶಿಷ್ಯತ್ವ ಕೋರಿ,
ದಪ್ಪ ಹೊತ್ತಿಗೆಗಳನು ಹೊತ್ ಹೊತ್ತು ಸಾಕಾಗಿ
ನಡುರಾತ್ರಿ ನಡೆದಿದ್ದೆ ರಫಿಯ ಮನೆಗೆ.

ರುಬಾಯತ್ ೪

ಆ ಸಖಿಯ ಒಲವಿನಾ ಮಂದ್ರ ಸಾಗರದಲ್ಲಿ
ಮುಳುಗುತ್ತ ತೇಲುತ್ತ ಸುಖಿಸುತ್ತ ಇರಲು.
ಉಂಟು-ಇಲ್ಲ-ಗಳೆಂಬ ದ್ವಂದ್ವದಲಿ ತಲೆತಿರುಗಿ
ಮೂರು ದಿನಗಳ ಸುಖದಿ ತತ್ವ ನೋಡಿದೆನು.

ರುಬಾಯತ್ತುಗಳಿಗೆ ಸದ್ಯ ವಿರಾಮ ಹಾಕುತ್ತ...


ಆ ಮೂರು ಗುಲಾಬಿಗಳು

ಪೇಟೆಯ ಹೂವಿನಂಗದಿಯಿಂದ ತಂದಿದ್ದು,
ಮಡದಿಯ ಮುದಕ್ಕಾಗಿ,
ಒಂದು ಬಿಳಿ, ಹಳದಿ ಮತ್ತೊಂದು, ಮಗದೊಂದು ಹಳದಿ-ಬಿಳಿ.

ಅರ್ಧ ಬಿರಿದ ಅವುಗಳ ಮುಖ,
ಸುವಾಸಿತ ಮೂಗು,
ಮೊಗ್ಗು- ಮೈ ಮರೆಸುವ ಬಿರಿದ ತುಟಿ.

ಹಗಲೆಲ್ಲ ಕನಸಿದ್ದು, ರಾತ್ರಿ ಕನವರಿಸಿದ್ದು,
ಮಧ್ಯವಯಸ್ಸಿನಾಚೆಗೆ ದಬ್ಬುವ
ವಯೋಶ್ವಕ್ಕೊಂದು ಲಗಾಮು.
ಆ ಮೂರು ಗುಲಾಬಿಗಳು,
ಆ ಮೊಗ್ಗು ಸುವಾಸನೆ,
ಮತ್ತು ಮೈಮರೆವು.

gaadha kattaleya ಆಳದಿಂದೆದ್ದು ಹರಿದು
ಚಿಮ್ಮುವ ನೆನಪಿನ ಸುಳಿಗಳು,
ಸುರುಳಿ ಬಿಚ್ಚುತ್ತಾ,
ಪದರಗಳ ಪರದೆ ತೆರೆದುಕೊಳ್ಳುತ್ತಾ,
ಸ್ಮೃತಿ ಪರದೆ ಬಣ್ಣ ಬಣ್ಣಗಳ ಮನೋರಂಜನ.

ಅವರು ಹಾಗೆ ತಂದಿದ್ದು ಆ ಮೂರು
ಗುಲಾಬಿಗಳು,
ಹಣೆಯ ಮೇಲಿನ ನೆರಿಗೆ ನಾಚಿತ್ತು,
ನಡು ನಡುಗಿತ್ತು,
ಆ ಮೂರು ಗುಲಾಬಿಗಳು,
ಜೀವನ್ಮಯ.

ಕಳೆದ ಯೌವನದ ಅವಳು,
ಪಕ್ಕದ ಮನೆಯ ಹುಡುಗಿ,
ಪ್ರಿಯಕರನಿತ್ತ ಮೊದಲ ಗುಲಾಬಿ,
ತಂದು ತೋರುವ ಜತನತೆ,
ಕಂಗಳು ಗುಲಾಬಿ ಬಟ್ಟಲು....

ಮಲಗುತ್ತೇನೆ ಗುಲಾಬಿಗಳ ಗುಚ್ಚವನ್ನು
ತಲೆದಿಮ್ಬಿಗಾನಿಸಿ ಪಕ್ಕದಲ್ಲಿ ಮೃದುವಾಗಿ....
ನಮ್ಮಿಬ್ಬರ ಮಧ್ಯೆ - ದೃಢವಾಗಿ,
ಬಂಧ ಮಂಪರು-
ಬಣ್ಣದ ನೆನಪು,
ಕನಸ ಕನಸಿದ ಭೂತಕಾಲ.
ವರ್ತಮಾನದ ಸುರುಳಿ ವರ್ತಿಗಳ
ತುದಿಯಲ್ಲಿ, ಮೈಯ ಬಿಸಿಯಳುಗಿನ ತುದಿ-
ನಮ್ಮಿಬ್ಬರ ಮಧ್ಯೆ - ಆ ಮೂರು ಗುಲಾಬಿಗಳು.

ಬಿಡುವುದಿಲ್ಲ ಆ ಗುಚ್ಚವನ್ನು,
ಸೆರಗಿನ ತುದಿಯಲ್ಲಿ ಮೃದುವಾಗಿ ಬಳಸಿ ಸುತ್ತಿ,
ಪರಿಮಳದ ಗುಂಗಿನಲ್ಲಿ
ಪದೇ ಪದೇ ಒಯ್ಯುತ್ತ ಮುಖದ ಮುಂದೆ....
ಕಣ್ಣಂಚಿನ ಹೊಳಪು- ಸಾವಿರ ಭಾವನೆಗಳು
ಚಿಮ್ಮುತ್ತಿವೆಯೋ ಎಂಬಂತೆ.

ಆಕಸ್ಮಿಕ ಕರೆದುಬಿದುತ್ತದೆ ಕನ್ನಡಿ!
ಚಿರ ಯೌವನೆಯಂತೆ,
ಕನ್ನಡಿ ಸುಳ್ಳುಬುರುಕ!
ಅಲ್ಲಿ ಅನ್ನ ಗಂಜಿಯಾಗಿರುತ್ತದೆ,
ನಗುತ್ತ ಮರೆತಿರುತ್ತೇನೆ ನನ್ನಷ್ಟಕ್ಕೇ.
ಛೆ,
ನಾನೆಂಥ ಹುಚ್ಚಿ.
ಅವರು ತಿನ್ನುತ್ತಾರೆ ಖುಷಿಯಿಂದ,
mukhadalli ಬಿರಿದ ಗುಲಾಬಿಯ ನಗು.

ಆ ಮೂರು ಗುಲಾಬಿಗಳು,
ಒಣಗುತ್ತವೆ,
ದಳಕಳೆದು ಬುಡವನ್ನು ಕಳಚಿಕೊಳ್ಳುವಂತೆ ಸ್ವತಂತ್ರ!

ಕಪ್ಪು ಹಿಡಿಯುತ್ತದೆ ದಳಗಲಂಚು,
ವಯಸ್ಸಾಗುವಂತೆ ಅವಕ್ಕೂ...

ವಯಸ್ಸು ಜಾರಿ ಜಾರಿ ಹಿಂದೆ ಹಿಂದೆ..
bhootadaaLakke, ಭವಿಷ್ಯದ ವಯೋಮಾನ ಹಿಂದಕ್ಕೆ...
ಮುದಮರದ ಗತ್ತಿಬೇರು.
ಹಸನು-ಹಸಿರು ಕ್ಷಣದ ಲಜ್ಜೆ. ಸದೈವಾರ್ದ್ರ..
ಆ ಮೂರು ಗುಲಾಬಿಗಳು......ಮತ್ತೆ ಸಿಗೋಣ.....

Wednesday, May 27, 2009

ಮೀನಹೆಜ್ಜೆ ...

ಹಾಯ್ , ಮೀನಹೆಜ್ಜೆ ಅಂತ ನನ್ನ ನಡೆಯನ್ನು ನಾನೇ ಕರೆದುಕೊಂಡು ನಿಮ್ಮೆದುರು ಇದುವರೆಗೆ ಕಾಣದ ಈ ಹೆಜ್ಜೆಗಳನ್ನು ಇಡಲು ಹೊರಟಿರುವ , ಕಣಾದರಾಘವ ಅಂತ ನನ್ನ ಹೆಸರು . ವೃತ್ತಿಯಲ್ಲಿ ನಾನು ಆಯುರ್ವೇದ ವೈದ್ಯ. ಬರೆಯುವುದು ತೀರದ ಹವ್ಯಾಸ ಮತ್ತು ತೀರವೊಂದಕ್ಕಾಗಿ ನನಗೆ ನಾನೇ ಕಂಡುಕೊಂಡ ಮೀನಹೆಜ್ಜೆ.

ಕಥೆ, ಕವಿತೆ ಮತ್ತು ನಾಟಕಗಳನ್ನು ಬರೆಯುತ್ತ , ಹಾಗೆ ಬರೆದ ಪ್ರತಿಗಳನ್ನು ಕಪಾಟಿನಲ್ಲಿ ಪೇರಿಸುತ್ತ , ಸಾಹಿತ್ಯಾಸಕ್ತರು ಮನೆಗೆ ಬಂದಾಗ ಮಾತ್ರ ಅವುಗಳಿಗೊಮ್ಮೊಮ್ಮೆ ಮುಕ್ತಿ ಕೊಡುತ್ತ , ಪುಕ್ಕಟೆ ಶಭಾಶ್ಗಿರಿಯ ಭಾರವನ್ನು ಹೆಗಲ ಮೇಲೆ ಹೊತ್ತು ಬೀಗುತ್ತ, ತೀರ ಸೋಮಾರಿಯಾಗಿ ನಾನಾಯಿತು, ನನ್ನ ಕ್ಲಿನಿಕ್ಕಾಯಿತು ಎಂಬಂತಿದ್ದ ನನ್ನ ೧೯೪೭ ರ ಮನಸ್ಸನ್ನು ಬದಲಾಯಿಸಿದ್ದು ಬ್ಲಾಗ್ ಲೋಕ. ಗೆಳಯ ಶ್ರೀನಿಧಿ ಮುಂಚೆಯಿಂದಲೂ ಕರೆಯುತ್ತಿದ್ದ,, ಬಾರಯ್ಯ, ಬರಿ, ....ಬಂದಿದ್ದೇನಯ್ಯ..

ಉಮರ್ ಖಯ್ಯಾಮನ ರುಬಾಯತ್ತುಗಳಿಂದ , ತೀವ್ರ ಪ್ರೇರಿತನಾಗಿ ರುಬಾಯತ್ತುಗಳ ರಚನೆಯಲ್ಲಿ ತೊಡಗಿದ್ದೇನೆ, ನಿಮಗಾಗಿ.....

ರುಬಾಯತ್ತುಗಳು


(೧)
ಒಂದು ದಿನ ಬಾಲ್ಯದಲಿ ವಿಜ್ಞಾನಮನೆ ಹೊಕ್ಕು
ಏನಿದರ ಮರ್ಮವದು ಅರಿಯಬಯಸಿ.
ಗೋಡೆ ಸಾಲುಗಳಲ್ಲಿ ದೇವದೇವರ ಚಿತ್ರ
ಕಂಡು ನಾ ಹಾರಿದ್ದೆ ಹೆಂಡದಂಗಡಿ ಕಡೆಗೆ.ಪ್ರತಿಕ್ರಿಯಿಸಿ, ನಿರೀಕ್ಷಿಸಿ... ನಿಮ್ಮವ,
ಕಣಾದ..