Sunday, April 11, 2010

ಇತ್ತೀಚಿನ ರುಬಾಯತ್ತುಗಳು

ನಟ್ಟಿರುಳು ಬೆಳಗಾಗಿ ಮತ್ತಿರುಳು ಹಗಲಾಗಿ
ಬಟ್ಟಲಾಗಸದಲ್ಲಿ ಶಶಿಯು ರವಿಯೂ..
ಸಾಕಿ ಸಾಕೇ ಸುರೆಯು ಇನ್ನೊಂದು ಬಟ್ಟಲಿಗೆ
ಚುಕ್ಕೆಗಳು ಬಂದಾವು ಮಲಗು ಬಾರಾ....


ಕೇಳ್ ಸಿತಾರಿನ ತಂತಿ ತನುಸ್ವನದಿ ನುಡಿಯುತಿದೆ
" ಸುಖ ದುಃಖವನು ನಾನು ಹಾಡಬಲ್ಲೆ!
ಮಧುಲಿಪ್ತಶಾರೀರ ರತಿಲಿಪ್ತ ಆತ್ಮವಿದು
ನೀ ತತ್ತ್ವವನುಭವಿಸು ನಾನೆ ನುಡಿವೆ!"


ಹಾಯ್! ನೋಡು, ಹಾಯ್ದೋಣಿ ಕಡಲಗಲವಳೆಯುತಿದೆ
ತುದಿಗೆ ಕಡಲಕ್ಕಿ ಅಣಕಿಸುತ ದೋಣಿಯನು
ಗೊತ್ತುಗುರಿ ಬೇಕಿಲ್ಲ ಹಾರುವಾಸೆಗೆ ಸಾಕಿ
ಚೇತನಕೆ ಮಿತಿಯಿಲ್ಲ ಹಾರೋಣ ಬಾರೆ!


ಜಾಹಿರಳು ನೀ ಸಾಕಿ ಶಾಯರರ ನುಡಿಗಳಲಿ
ಬಡವನಾಡುವುದ ಕೇಳುವೆಯ ನೀನು?
ತಂತ್ರಮಂತ್ರಗಳೊಳಗೆ ಹೊಸತನವ ಹುಡುಕುತ್ತ
ಹಳತನ್ನೆ ನುಡಿಸುವೆನು ನುಡಿವೆಯೇನು?


ಕಾವಳದ ಚಾದರದಿ ಅಡಗಿ ಮೆಲ್ಲನೆ ಅಡಿಯ-
-ನಡಗಿಸುತಲೇ ಬರುವ ಮಾಗಿಯಂತೆ,
ಮಿದುಸಿತಾರಿನ ತಂತಿಗಳ ಮೀಂಟು ಕಣ್ಮುಚ್ಚಿ
ಮಧು-ಮಂಜು-ರತಿ-ಗೀತ, ನಿರ್ವಾಣ ಸಾಕಿ!


ಕುರುಡು ರಾತ್ರಿಯ ದಟ್ಟ ಕಪ್ಪು ಸುತ್ತಲು ಸಾಕಿ
ಚುಕ್ಕಿಯಣಕಿನ ಎದುರು ಭುವಿ ಬಾಗಿತಲ್ಲ!
ನಿಶೆ ಕಪ್ಪು ಭವ ಕಪ್ಪು ಕ್ಷಿತಿಜ ಕಪ್ಪಿರಲಿ ಬಿಡು
ತೆರೆದ ಬಾಗಿಲ ಬುಡದಿ ಹಣತೆ ಹಚ್ಚು.


ಸಾಕಿ ಕಿಸೆಯಲಿ ಚಂದ್ರತಾರೆಗಳ ತಂದಿರುವೆ,
ಎಂದಿನಂತೆಯೆ ಇಂದು ಬರಬಹುದೆ ಒಳಗೆ?
ಹಣವಂತರಿಗೆ ನೀಡು ಮಧುಪಾತ್ರೆಗಳ, ನಿನ್ನ
ಕಣ್ಣಬಟ್ಟಲ ಮದಿರೆಯೆನಗೆ ಸಾಕು!

5 comments:

  1. ಬ್ಯೂಟೀಸ್! ಸಖತ್ ಇಷ್ಟ ಆತು..

    ReplyDelete
  2. ಸುಶ್ರುತನ ಲಿಂಕ್ ನಿಂದ ಇಲ್ಲಿಗೆ ಬಂದೆ.
    ತುಂಬ ಇಷ್ಟ ಆಯ್ತು.
    ಪ್ರತಿ ಸಾಲೂ ಒಂದರೊಳಗೊಂದು ಅರಳುತ್ತ ಘಮ್ಮೆನ್ನುತ್ತಿವೆ.

    ತೆರೆದ ಬಾಗಿಲ ಬುಡದಲಿ ಹಣತೆ ಹಚ್ಚಲು ಕೇಳುವುದೂ ಅಪರೂಪ, ಬಾಗಿಲು ತೆರೆದು ಹಣತೆ ಹಚ್ಚಲು ಸಿಗುವವರೂ ಅಪರೂಪ - ಆದರೆ ನಿಮ್ಮ ಸಾಲುಗಳಲ್ಲಿ ಜೀವಂತವಾಗಿದ್ದಾರೆ.

    ಓದಿ ಮನಸ್ಸಿನ ತುಂಬ ಮುದದ ಗಂಧ. ಇನ್ನೂ ಹೆಚ್ಚು ಬರೆಯಿರಿ,

    -ಪ್ರೀತಿಯಿಂದ,
    ಸಿಂಧು

    ReplyDelete
  3. pratikriyisida geleyarige, thumba dhanyavaadagalu. nimma protsaaha amoolya..

    ReplyDelete
  4. thumbane sogasagide. adre saki andre enu.

    ReplyDelete